ಬೆಂಗಳೂರು,ಮಾರ್ಚ್ 8: ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಕಲ್ಪಿಸುವ ಸಿಇಟಿ ಪರೀಕ್ಷೆ ಏಪ್ರಿಲ್ ೨೮ ಹಾಗೂ ೨೯ ರಂದು ನಡೆಯಲಿದೆ.
ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಈ ವಿಷಯ ಪ್ರಕಟಿಸಿದರಲ್ಲದೇ ಏಪ್ರಿಲ್ ೨೮ ರ ಬುಧವಾರ ಬೆಳಿಗ್ಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಏಪ್ರಿಲ್ ೨೯ ರ ಬೆಳಿಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದ ಅವರು,ರಾಜ್ಯದ ಮೂವತ್ತು ಜಿಲ್ಲಾ ಕೇಂದ್ರಗಳು ಮತ್ತು ಹದಿಮೂರು ತಾಲ್ಲೂಕು ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ನುಡಿದರು.
ವೈದ್ಯಕೀಯ,ದಂತವೈದ್ಯಕೀಯ,ಇಂಜಿನಿಯರಿಂಗ್,ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೊಪತಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಸಿಇಟಿ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಮಾರ್ಚ್ ೧೦ ನಂತರ ಬ್ರೋಷರ್ ಹಾಗೂ ಅಗತ್ಯದ ಅರ್ಜಿ ನಮೂನೆಗಳನ್ನು ಕಳಿಸಲಾಗುವುದು ಎಂದೂ ಅವರು ಸ್ಪಷ್ಟ ಪಡಿಸಿದರು.
ಅಭ್ಯರ್ಥಿಗಳು ಮಾರ್ಚ್ ೧೭ ರ ಒಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ ೧೭ ರ ಒಳಗೆ ಸಲ್ಲಿಸಬೇಕು ಎಂದ ಅವರು,ಪ್ರಸಕ್ತ ವರ್ಷ ಈಗಾಗಲೇ ೧,೩೫,೦೦೦ ಅಭ್ಯರ್ಥಿಗಳು ಬ್ರೋಷರ್‌ಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ ಎಂದರು.
ಆನ್‌ಲೈನ್ ಸೀಟು ಪ್ರಕ್ರಿಯೆಯನ್ನು ಬೆಂಗಳೂರು,ಹುಬ್ಬಳ್ಳಿ,ಗುಲ್ಬರ್ಗ,ಶಿವಮೊಗ್ಗ ಹಾಗೂ ಮಂಗಳೂರುಗಳಲ್ಲಿ ನಡೆಯಲಿದೆ.ಇದಕ್ಕೆ ಪೂರಕವಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ವಿವರ ನೀಡಿದರು.
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಾಜ್ಯದ ಆಯ್ದ ನೂರಾ ಒಂದು ಕೇಂದ್ರಗಳಲ್ಲಿ ಉಚಿತ ಸಿಇಟಿ ತರಬೇತಿ ನೀಡಲಾಗುತ್ತಿದೆ ಎಂದರು.
ಇಪ್ಪತ್ತು ಸಾವಿರದವರೆಗೆ ಇಂಜಿನಿಯರಿಂಗ್ ರ್‍ಯಾಂಕಿಂಗ್ ಪಡೆಯುವ ಮತ್ತು ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿಗಳಿಗೂ ಕಡಿಮೆ ಇರುವ ವಿದ್ಯಾರ್ಥಿಗಳು ೧೫೦೦೦ ರೂ ಮತ್ತಿತರ ಶುಲ್ಕವನ್ನು ಪಾವತಿಸಿ ಸೀಟು ಪಡೆಯಲು ಈ ಸಲ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಕರ್ನಾಟಕದ ಹೊರಗೆ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಪ್ರಸಕ್ತ ಸಾಲಿನಿಂದ ಸಿಇಟಿ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಇದೇ ರೀತಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ಮೂಲಕ ಸೂಚನೆಗಳನ್ನು ಕಳುಹಿಸಲಾಗುವುದು ಎಂದೂ ಅವರು ತಿಳಿಸಿದರು.
ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸುವ ಬದಲು ಮೂಲ ವಿಜ್ಞಾನ ಕಾಲೇಜುಗಳನ್ನು ತೆರೆಯಲು ಮುಂದಾಗುವಂತೆ ಇದೇ ಸಂಧರ್ಭದಲ್ಲಿ ಅವರು ಖಾಸಗಿಯವರಿಗೆ ಮನವಿ ಮಾಡಿಕೊಂಡರು.
ನಮ್ಮಲ್ಲಿ ಅಗತ್ಯವಾದಷ್ಟು ಇಂಜಿನಿಯರಿಂಗ್ ಕಾಲೇಜುಗಳು ಇವೆ.ಹೀಗಾಗಿ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದರು. ಇದೇ ರೀತಿ ಎಐಸಿಟಿಇಗೂ ತಾವು ಮನವಿ ಮಾಡಿಕೊಂಡಿದ್ದು ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳಿಗೆ ಪರವಾನಿಗೆ ಕೊಡುವ ಮುನ್ನ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವಂತೆ ಹೇಳಿದರು.